Excellent Tuitions




  • About
  • Services
  • FAQ
  • Home
  • Contact Us:
  • Quiz
  • Humour
  • Quiz





Humour in Astrology ಮನರಂಜನೆಗಾಗಿ ಜ್ಯೋತಿಷ್ಯ

ಈ ಕಾರ್ಯಕ್ರಮದಲ್ಲಿ ಇರುವ ಮತ್ತು ಬರುವ ಎಲ್ಲಾ ಪಾತ್ರಗಳು ಸಹ ಸಂಪೂರ್ಣವಾಗಿ ಕೇವಲ ಕಾಲ್ಪನಿಕವಾಗಿವೆ. ಈ ಪಾತ್ರಗಳಿಗೂ ಹಾಗು ಬೇರೆ ಯಾರಿಗೂ ಸಹ ಯಾವುದೇ ರೀತಿಯ ಸಂಬಂಧಗಳೇನಾದರೂ ಅಕಸ್ಮಾತ್ ಇದ್ದರೆ ಅವು ಕೇವಲ ಕಾಕತಾಳೀಯ ಮತ್ತು ಸಂಪೂರ್ಣವಾಗಿ ಅನುದ್ದೇಶಿತ.

ಪಾತ್ರಗಳ ಕಿರು ಪರಿಚಯ

ಅಂಕುರ್: ಕಾರ್ಯಕ್ರಮ ನಿರ್ವಾಹಕ

ಬ್ರಹ್ಮಾನಂದ ಗುರೂಜಿ: ಜ್ಯೋತಿಷಿ, ಮುಖ್ಯ ಅತಿಥಿ

ಪ್ರಸಾದ್: ಕಾರ್ಯಕ್ರಮ ವೀಕ್ಷಕ

ಮೂರ್ತಿ: ಕಾರ್ಯಕ್ರಮ ವೀಕ್ಷಕ

ವಿಲ್ಸನ್: ಕಾರ್ಯಕ್ರಮ ವೀಕ್ಷಕ

ಆನಂದ್: ಪರಿಚಾರಕ

ರಘು: ಪರಿಚಾರಕ

ತಕ್ಷಕ: ಜ್ಯೋತಿಷಿಯ ಸಹಾಯಕ

ರಾಜಣ್ಣ: ಕಾಲ ಕಾಲಕ್ಕೆ ಸರಿಯಾಗಿ ತಿಂಡಿ ತಿನಿಸು ಸರಬರಾಜು ಮಾಡುವ ಏರ್ಪಾಡು ಮಾಡುವವ ​

(ಶಂಖವಾಧ್ಯದ ಜೊತೆಗೆ ಮಹಾಭಾರತದ ಮೊದಲ ಗೀತೆಯಿಂದ ಕಾರ್ಯಕ್ರಮದ ಪ್ರಾರಂಭ)

ಅಂಕುರ್: ಎಲ್ಲಾ ಆತ್ಮೀಯ ವೀಕ್ಷಕರಿಗೆ ಸ್ವಾಗತ ಸುಸ್ವಾಗತ (ಮುಗುಳುನಗೆಯೊಂದಿಗೆ)

ಆನಂದ್: ರೀ ಸ್ವಾಮಿ ಎಷ್ಟುಸಾರಿ ಹೇಳಬೇಕರೀ ನಿಮಗೆ..... ಬ್ರಾಕೆಟ್ನಲ್ಲಿ ಇರೊದನ್ನೆಲ್ಲಾ ಓದಬೇಡಿ ಅಂತ.

ಅಂಕುರ್: ಓ ಸಾರಿ ....... ಹಾ ..... ಪ್ರಿಯ ವೀಕ್ಷಕರಿಗೆ ಕಾಲ್ ಮಾಡಿ ಕಣೀ ಕೇಳಿ ಕಾರ್ಯಕ್ರಮದ ಪಿತೂರಿಯ ಮೊದಲನೇ ಸುತ್ತಿಗೆ ಸ್ವಾಗತ. ಇಂದಿನ ನಮ್ಮ ಕಾರ್ಯಕ್ರಮದ ಮುಖ್ಯ ಅತಿಥಿ ..... ಸಾಮಾನ್ಯ ....... ಅಲ್ಲ ... ಸಾರಿ .... ಸನ್ಮಾನ್ಯ ಜ್ಯೋತಿಷಿ ಶ್ರೀ ಶ್ರೀ ಶ್ರೀ ಬ್ರಹ್ಮಾನಂದ ಗುರೂಜಿಯವರು. ಇವರ ಕಿರು ಪರಿಚಯವನ್ನು ನಾನು ಈಗ ನಿಮಗೆಲ್ಲರಿಗೂ ಸಹ ಮಾಡಿಕೊಡ್ತೀನಿ. ಶ್ರೀ ಶ್ರೀ ಶ್ರೀ ಬ್ರಹ್ಮಾನಂದ ಗುರೂಜಿಯವರು ಕೇವಲ ಜ್ಯೊತಿಷ್ಯ ಶಾಸ್ತ್ರದಲ್ಲಿ ಮಾತ್ರವಲ್ಲ, ಅವರು ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ, ತರ್ಕಶಾಸ್ತ್ರ, ನಾಟ್ಯಶಾಸ್ತ್ರ, ಶಕುನಶಾಸ್ತ್ರ ಹೀಗೆ ಹಲವಾರು ಶಾಸ್ತ್ರಗಳಲ್ಲಿ ಪಾಂಡಿತ್ಯವನ್ನು ಪಡೆದಿದ್ದಾರೆ. ಬ್ರಹ್ಮಾನಂದ ಗುರೂಜಿಯವರು ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲ, ಇಡೀ ಭಾರತದಲ್ಲಿ ಹಾಗೂ ಶ್ರೀಲಂಕ, ಮಲೇಷಿಯ, ಸಿಂಗಪೂರ್, ಅಬೂದಾಬಿ, ಮೊದಲಾದ ದೇಶಗಳಲ್ಲಿಯೂ ಸಹ ....

ರಘು: ಅತ್ಯಂತ ಹೆಚ್ಚಾಗಿ ಉಪಯೋಗಿಸುವ ಮತ್ತು ಮಾರಾಟವಾಗುವ ಹಲ್ಲುಪುಡಿಯೇ ಗೋಪಾಲ್ ಬ್ರಾಂಡ್ ಹಲ್ಲುಪುಡಿ.

ಅಂಕುರ್: ರೀ ರಘು, ಎಸ್ಟುಸಾರಿ ಹೇಳಬೇಕ್ರಿ ನಿಮಗೆ .... ಪ್ರೋಗ್ರಾಂ ಆಗುವ ಸಮಯದಲ್ಲಿ ಈ ರೀತಿ ಡಿಸ್ಟರ್ಬ್ ಮಾಡಬೇಡಿ ಅಂತ ...... ಪ್ಲೀಸ್ ...... ಸಾರಿ ....... ಈಗ ನಮ್ಮ ಮುಂದೆ ಬರಲಿದ್ದಾರೆ ಪ್ರಖ್ಯಾತ ವೈಜ್ಞಾನಿಕ ಜ್ಯೋತಿಷಿ ಶ್ರೀ ಶ್ರೀ ಶ್ರೀ ಬ್ರಹ್ಮಾನಂದ ಗುರೂಜಿಯವರು. ಬನ್ನಿ ಅವರಿಗೆ ಸ್ವಾಗತ ಕೋರೋಣ. ಕೇವಲ ಮುವ್ವತ್ತು ಸೆಕೆಂಡುಗಳಷ್ಟು ಸಮಯ ನೀವೆಲ್ಲರೂ ಸಹ ನಿಮ್ಮ ನಿಮ್ಮ ಕಣ್ಣುಗಳನ್ನು ನೀವೇ ಮುಚ್ಚಿಕೊಂಡು ನಿಮ್ಮ ನಿಮ್ಮ ಕೈಗಳಿಂದ ನೀವೇ ಕೈಮುಗಿದುಕೊಂಡು ಓಂಕಾರದೊಂದಿಗೆ ಧ್ಯಾನಿಸಿ.

ಬ್ರಹ್ಮಾನಂದ ಗುರೂಜಿ: (ಅಭಯ ಹಸ್ತದೊಂದಿಗೆ ಆಗಮನ)

ಅಂಕುರ್: ನಮಸ್ಕಾರ ಸ್ವಾಮೀಜಿ

ಬ್ರಹ್ಮಾನಂದ ಗುರೂಜಿ: ಓಂ ಭುವಃ

ಅಂಕುರ್: ಈ ದಿನ ನಮ್ಮ ಕಾರ್ಯಕ್ರಮಕ್ಕೆ ನೀವು ಬಂದಿರುವುದು ತುಂಬಾ ತುಂಬಾನೆ ಸಂತೋಷವಾಗ್ತಾಇದೆ ಗುರೂಜಿ

ಬ್ರಹ್ಮಾನಂದ ಗುರೂಜಿ: ಧನ್ಯವಾದ

ಅಂಕುರ್: ಬನ್ನಿ ಹಾಗಿದ್ರೆ, ನಮ್ಮ ಕಾರ್ಯಕ್ರಮಾನ ಸುರು ಮಾಡಿಕೊಂಡ್ಬಿಡೋಣ ..... ಗುರೂಜೀ ನಿಮಗೆ ಈ ಜ್ಯೋತಿಷ್ಯ ಶಾಸ್ತ್ರದ ಬಗ್ಗೆ ಏನನ್ನಿಸುತ್ತೆ?

ಬ್ರಹ್ಮಾನಂದ ಗುರೂಜಿ: ಓಂ ಭುವಃ ..... ನೋಡಿ ಈ ಜ್ಯೋತಿಷ್ಯ ಶಾಸ್ತ್ರ ಅನ್ನೋದು .... ಅದು ಒಂದು ಇದು ..... ಇದು ಕೆಲವೊಮ್ಮೆ ಅದು ..... ಅದು ಒಂದೊಂದು ಸಲ ಒಂದೊಂದುತರ ......... ಕಾಣಿಸುತ್ತೆ .....

ಅಂಕುರ್: ಯಾವುದರ ತರ?

ಬ್ರಹ್ಮಾನಂದ ಗುರೂಜಿ: ಹಾ.... ಹಾ .... ಅದೇ ಇದರತರ ... ಹಾ.... ಹಾ .... ಇದೇನಿದೆ ಅಂತ ನಾವು ಸರಿಯಾಗಿ ಅರ್ಥಮಾಡಿಕೊಂಡರೆ ಅದು ಒಂದು ಇದಾಗಬಹುದು ..... 

ಅಂಕುರ್: ಏನಾದರೂ ಆಗೋ ಹಾಗಿದ್ದರೆ ಆಗಲಿ ಬಿಡಿ .... ಈಗ ಜನ ಹೆಚ್ಚಾಗಿ ಜ್ಯೋತಿಷ್ಯ ಶಾಸ್ತ್ರವನ್ನು ನಂಬಲ್ಲ. ಇದಕ್ಕೆ ಕಾರಣ ಏನಿರಬಹುದು ಅಂತ?

ಬ್ರಹ್ಮಾನಂದ ಗುರೂಜಿ: ಇದಕ್ಕೆ ಕಾರಣ ಅಂತಂದರೆ .... ಅದು ಕಲಿಯುಗ .... ಒಂದು ಶ್ಲೋಕದ ಪ್ರಕಾರ ...... ಕಲೀನಾಂ ಕಲಾಯುಧಮಂತ್ರಷ್ಯ ಕಲೀನಾಂ ಕಲಾಜನ ಸಂಭವಃ ಕಲೀಯಾಮ್ ತಪಃ ...

ಅಂಕುರ್: ಹಂಗಂದ್ರೆ ಏನು?

ಬ್ರಹ್ಮಾನಂದ ಗುರೂಜಿ: ಹಂಗದ್ರೆ ಏನೂ ಅಂತ .... ನನಗೂ ಸರಿಯಾಗಿ ಗೊತ್ತಿಲ್ಲಾ .... ಆದರೆ ಅದನ್ನ ಯಾರೋ .... ಯಾವಾಗಲೋ ..... ಯಾತಕ್ಕಾಗೋ .... ಹೇಳಿರಬಹುದೇನೋ .... ಅಂತ ..... ನನ್ನ ಒಂದು ಇದು....

ಅಂಕುರ್: ಸ್ವಾಮೀಜೀ ನಿಮಗೊಂದು ವಿನಂತಿ .... ದಯವಿಟ್ಟು ಹೀಗೆ ಅರ್ಥ ಗೊತ್ತಿಲ್ಲದೇ ಇರುವ ಶ್ಲೋಕಗಳನ್ನು ಹೇಳಿ ನಮಗೆ ಕನ್ಫ್ಯೂಜ್ ಮಾಡಬೇಡಿ ... ಖಚಿತವಾಗಿ ಅರ್ಥ ಗೊತ್ತಿದ್ದರೆ ಅಂತಹ ಶ್ಲೋಕಗಳನ್ನು ಮಾತ್ರ ಹೇಳಬೇಕು...

ಬ್ರಹ್ಮಾನಂದ ಗುರೂಜಿ: ಹಾ .... ಹು ... ಅಷ್ಟೇ ಏಕೆ .... ಒಂದು ಜಾತಕದ ಗುಣವನ್ನು ಈ ರೀತಿಯಲ್ಲೂ ಹೇಳಬಹುದು ...

ಅಂಕುರ್: ಹೇಗೆ?

ಬ್ರಹ್ಮಾನಂದ ಗುರೂಜಿ: ಕಲಿ ಕಲಿ ಕಲಿ ಎಂದು ಕುಣಿದಾಡದಿರಿ ನಿಮ್ಮ ಕಲಿಯ ತಲೆಯ ನೀನೆಂದು .....

ಅಂಕುರ್: ಗುರೂಜಿ, ಅದು ಕುಲ ಕುಲ ಕುಲ ಅಂತ ಅಲ್ಲವೇ.....

ಬ್ರಹ್ಮಾನಂದ ಗುರೂಜಿ: ಓಹೋ .... ಹಾಗೆ ಜನ ಅದನ್ನೂ ಬದಾಲಾಯಿಸಿಕೊಂಡಿದ್ದಾರ! ..... ನೋಡಿ ಈ ಕಲಿಯುಗದಲ್ಲಿ ಇದ್ಧದ್ದನ್ನು ಇದ್ದಂತೆ ಇರೋಕೆ ಯಾರೂ ಬಿಡಲ್ಲ..... ಅದನ್ನ ಏನೇನೊ ಮಾಡ್ಕೊಂಡ್ಬಿಡ್ತಾರೆ...... ಚೆವೊಂಭೋ ಫ್ಯಾಷನೋ ಕಲಹ ಅಂತ .... ಇದರಲ್ಲಿ ಈ ಕುಲದ ಹಿಂದೆ ಫ್ಯಾಷನ್ ಬಂತು ...... ಫ್ಯಾಷನ್ ಹಿಂದೆ ಅದು ಬಂತು ..... ಅದರ ಹಿಂದೆ ಇದು ಬಂತು ...... ಇದರ ಹಿಂದೆ ಅದು ಬಂತು ...... ಅದು ಬಂತು .... ಇದು ಬಂತು ...... ಇದು ಬಂತು ಅದು ಬಂತು ..... ಇನ್ನೊಂದು ಬಂತು .... ಮತ್ತೊಂದು ಬಂತು ..........( ಮೊಬೈಲ್ ವೈಬ್ರೇಷನ್ ) ......ತಕ್ಷಕ ..... ಬಾ ಇಲ್ಲಿ .... ಗುರೂಜಿ ಮೀಟಿಂಗ್ ನಲ್ಲಿ ಬ್ಯುಜಿಯಾಗಿದ್ದಾರೆ .... ಅಮೇಲೆ ಮತ್ತೆ ಸಿಗ್ತಾರೆ .... ಅಂತ ಹೇಳಿಬಿಡು. ಹಾಂ ಇದು .. ಏನು ಹೇಳ್ತ ಇದ್ದೆ ....

ಅಂಕುರ್: ಹಾ ಅದೆ ಹೇಳ್ತ ಇದ್ರ. .....

ಬ್ರಹ್ಮಾನಂದ ಗುರೂಜಿ: ಅದಲ್ಲಾರೀ .... ಇನ್ನೇನಾದರೂ ಪ್ರಶ್ನೆ ಇದೆಯ?

ಅಂಕುರ್: ಹಾ ಗುರೂಜಿ ...... ಇನ್ನೇನೂ ಪ್ರಶ್ನೆಯಿಲ್ಲ. ... ಬನ್ನಿ ನಮ್ಮ ಮೊದಲನೇ ಸುತ್ತಿನ ಕಾರ್ಯಕ್ರಮಕ್ಕೆ ಹೋಗೋಣ ...... ಕಾಲ್ ಮಾಡಿ ....... ಕಣಿ ಕೇಳಿ .........ಈಗ ನೋಡೋಣ ನಮ್ಮ ಮೊದಲನೇ ಕಾಲರ್ ಯಾರು ಅಂತ. 

ಪ್ರಸಾದ್: ಸಾರ್ ನಾನು ಪ್ರಸಾದ್ ಅಂತ.

ಅಂಕುರ್: ಹೇಳಿ ಪ್ರಸಾದ್ ಏನು ನಿಮ್ಮ ಪ್ರಶ್ನೆ ಅಂತ

ಪ್ರಸಾದ್: ನಾನು ಐಬಿಐಬಿಐ ಬ್ಯಾಂಕ್ ನಿಂದ ಮಾತನ್ನಾಡ್ತ ಇದ್ದೇನೆ.

ಅಂಕುರ್: ತುಂಬಾ ಸಂತೋಷ ... ಹೇಳಿ ಪ್ರಸಾದ್ ನಿಮ್ಮ ಪ್ರಶ್ನೆ ಏನೂ ಅಂತ.

ಪ್ರಸಾದ್: ನಿಮಗೇನಾದರೂ ಪರ್ಸನಲ್ ಲೋನ್ ಬೇಕಾ

ಅಂಕುರ್: ಸಾರೀ .... ಪ್ರಸಾದ್ ನಿಮ್ಮ ಪರ್ಸನಲ್ ಲೋನ್ ನ ಪಬ್ಲಿಕ್ ಆಗಿ ಯಾಕ್ರೀ ಕೇಳತಾ ಇದ್ದೀರಾ .... ಥೂ!

ಪ್ರಸಾದ್: ಸಾರ್ ನಾವು ಪರ್ಸನಲ್ ಲೋನ್ ಒಂದೇ ಅಲ್ಲ ಯಾವುದಕ್ಕೆ ಬೇಕಾದರೂ ಲೋನ್ ಕೊಡ್ತೀವಿ, ಮನೆಗೆ, ಟೀವೀಗೆ, ಫ್ರಿಡ್ಜ್ ಗೆ, ಫ್ಯಾನ್ ಗೆ, ಮದುವೆಗೆ, ತಿಥಿಗೆ, ಯಾವುದಕ್ಕೆ ಬೇಕಾದರೂ ...

ಅಂಕುರ್: ಸರಿ ಪ್ರಸಾದ್ .... ನನ್ನ ಹನ್ನೊಂದನೇ ದಿವಸದ ತಿಥಿಗೆ ನಿಮ್ಮ ಹತ್ರಾನೆ ಬರ್ತೀನಿ. ಈಗ ಫಸ್ಟು ಫೋನ್ ಡಿಸ್ಕನೆಕ್ಟ್ ಮಾಡಿ ಅಷ್ಟೇ ಸಾಕು .... ಬೇರೇ ಕಾಲರ್ಸಗೆ ದಯವಿಟ್ಟು ಅವಕಾಶ ಮಾಡಿಕೊಡಿ ನಮಸ್ಕಾರ! ....... ಸಾರಿ ಗುರೂಜಿ ...... ಕ್ಷಮಿಸಬೇಕು ..... ಮೊದಲನೇ ಕಾಲೇ ಈ ರೀತಿ ಅಪಶಕುನ ಆಗ್ಹೋಯ್ತು. ಹಾ ಈಗ ನೋಡೋಣ ಮುಂದಿನಕರೆ ಯಾರದ್ದು ಅಂತ. ..... ಆ ... ಹ .... ಹಲೋ ....ಹಲೋ .....

ಮೂರ್ತಿ: ಹಲೋ ಸಾರ್ ನಮಸ್ಕಾರ 

ಅಂಕುರ್: ನಮಸ್ಕಾರ .... ಹು ಹೇಳಿ ಯಾರು ಮಾತನಾಡ್ತ ಇರೋದು.

ಮೂರ್ತಿ: ಸಾರ್ ಅದು ಬಂದು ನನ್ನ ಹೆಸರು ಮೂರ್ತಿ ಅಂತಾ.

ಅಂಕುರ್: ಹೂ ... ಒಳ್ಳೆ ಹೆಸರು ಇಟ್ಟುಕೊಂಡಿದ್ದೀರಾ ಹೇಳಿ ಮೂರ್ತಿಯವರೇ ಏನು ನಿಮ್ಮ ಪ್ರಶ್ನೆ ಅಂತಾ.

ಮೂರ್ತಿ: ನಾನು ನಾಗಮಂಡಲದಿಂದ ಕಾಲ್ ಮಾಡ್ತಾ ಇದ್ದೀನಿ ಸಾರ್.

ಅಂಕುರ್: ಹಾ .... ಹೇಳಿ ಮೂರ್ತಿಗಳೇ ...

ಮೂರ್ತಿ: ಸಾರ್ ನನ್ನದೊಂದು ಸಮಸ್ಯೆಯಿದೆ.

ಅಂಕುರ್: ಹೂ ಹೇಳಿ ಏನು ನಿಮ್ಮ ಸಮಸ್ಯೆ ಅಂತ

ಮೂರ್ತಿ: ಎಲ್ಲರೂ ನನ್ನನ್ನ ದಡ್ಡ, ನಾವು ಹೇಳೋದು ನಿನಗೆ ಸರಿಯಾಗಿ ಅರ್ಥ ಅಗೊಲ್ಲ ಅಂತೆಲ್ಲಾ ಬೈತಾನೇ ಇರ್ತಾರೆ ಸಾರ್

ಅಂಕುರ್: ಬಹಳ ಸಂತೋಷ .... ಆ ...... ಆ ..... ಪ್ರಶ್ನೆ ಕೇಳಿದ್ದಕ್ಕೆ.... ಆ ..... ಆ ..... ಕರೆಮಾಡಿದ್ದಕ್ಕೆ ....... ಆ .... ಮೂರ್ತಿಯವರೆ ನಿಮ್ಮ ದೀಟೈಲ್ಸನ್ನು ಮತ್ತೆ ನನಗಲ್ಲ ..... ನಮ್ಮ ಮತ್ತು ನಿಮ್ಮ ಪ್ರೀತಿಯ ಗುರೂಜಿಯವರಿಗೆ ಹೇಳಿ. ಅವರು ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಹುಡುಕಿ ಕೊಡ್ತಾರೆ. ನಿಮ್ಮ ಪ್ರಾಬ್ಲಂನ ಸಾಲ್ವ್ ಮಾಡ್ತಾರೆ. ಕೇಳಿ ......

ಮೂರ್ತಿ: ಸರಿ ..... ನಮಸ್ಕಾರ .......ಗುರೂಜಿ .......

ಬ್ರಹ್ಮಾನಂದ ಗುರೂಜಿ: ಓಂ ಭುವಃ ....... ಹೇಳಿ ಮೂರ್ತಿಗಳೇ ....... ನೀವು ಎಲ್ಲಿ ಕೆಲಸ ಮಾಡ್ತೀರ ಅಂತ.

ಮೂರ್ತಿ: ಅದು ಬಂದು ಇಲ್ಲಿ ನಮ್ಮ ಮನೆ ಇದೆಯಲ್ಲಾ ಸಾರ್ ... ಇಲ್ಲಿಂದ ಹೋಗಿ ಬಲಗಡೆಗೆ ತಿರುಗಿಕೊಂಡರೆ ಅಲ್ಲಿ ಒಂದು ಬೇಕರಿ ಇದೆಯಲ್ಲಾ ಸಾರ್ ಅದಕ್ಕೆ ಸ್ವಲ್ಪ ಮುಂದೆ ಹೋದರೆ ಅಲ್ಲಿ ಒಂದು ಡಾಕ್ಟರ್ ಶಾಪು ಸಿಗುತ್ತೆ ಅದರ ಹಿಂಭಾಗದಲ್ಲೇ ಇರುವ ಸ್ಮಶಾನ ದಾಟಿಕೊಂಡು ಸ್ವಲ್ಪ ಮುಂದೆ ಹೋದರೆ ಅಲ್ಲಿ ಒಂದು ಆಫೀಸು ಇದೆಯಲ್ಲಾ ಸಾರ್ .... ಅಲ್ಲೇ ಸಾರ್ ..... ನಾನು ಕೆಲಸಮಾಡೋದು.

ಬ್ರಹ್ಮಾನಂದ ಗುರೂಜಿ: ಆ ..... ಆ .... ನೀವು ಹುಟ್ಟಿದ್ದು ಯಾವಾಗ 

ಅಂಕುರ್: ನೀವು ಹುಟ್ಟಿದ್ದು ಯಾವಾಗ?

ಮೂರ್ತಿ: ಅದು ಬಂದು ನಾನು ತುಂಬಾ ಚಿಕ್ಕವಯಸ್ಸಿನಲ್ಲೇ ಹುಟ್ಟ್ಬಿಟ್ಟೆ ಸಾರ್ ...... ಅದೇ ತಪ್ಪಾಗಿದ್ದು ಸಾರ್.

ಅಂಕುರ್: ಹಾ ... ಮೂರ್ತಿಯವರೆ .... ನಿಮ್ಮ ಜನ್ಮದಿನಾಂಕ ಹೇಳಿ

ಮೂರ್ತಿ: ಅದು ಬಂದು ಸುಮಾರು ಹದಿನೈದು - ಆರು - ಒಂದು ಸಾವಿರದ ಒಂಬೈನೂರ ಎಪ್ಪತ್ತು ಸಾರ್ (೧೫ - ೬ - ೧೯೭೦)

ಬ್ರಹ್ಮಾನಂದ ಗುರೂಜಿ: ಹೂ ಸರಿ ನಿಮ್ಮ ಮದುವೆಯಾಗಿದ್ದು

ಮೂರ್ತಿ: ಅದು ಬಂದು ಸುಮಾರು ನನಗೆ ಒಂದು ಇಪ್ಪತ್ತೈದು ತುಂಬಿ ಇಪ್ಪತ್ತಾರಕ್ಕೆ ಬಿದ್ದಿತ್ತಲ್ಲಾ ಸಾರ್ ... ಆವಾಗ ಸಾರ್.

ಬ್ರಹ್ಮಾನಂದ ಗುರೂಜಿ: ನಾವೇ ಕ್ಯಾಲ್ಕುಲೇಷನ್ ಮಾಡ್ಕೋಬೇಕಾ ....

ಅಂಕುರ್: ರೀ ಮೂರ್ತಿಗಳೇ .... ನಿಮ್ಮ ಡೇಟ್ ಹೇಳಿ ಮದುವೇದು

ಮೂರ್ತಿ: ಅದು ಬಂದು ಸುಮಾರು ಇಪ್ಪತ್ನಾಕು - ಒಂಬತ್ತು - ಒಂದು ಸಾವಿರದ ಒಂಬೈನೂರ ತೊಂಬತ್ತಾರು ಸಾರ್ (೨೪ - ೯ - ೧೯೯೬)

ಬ್ರಹ್ಮಾನಂದ ಗುರೂಜಿ: ಹಾ ಮೂರ್ತಿಯವರೆ .... ನಿಮ್ಮ ಪೂರ್ತಿ ಹೆಸರು ಹೇಳಿ

ಮೂರ್ತಿ: ಪೂರ್ತಿ ಹೆಸರು ಹೇಳಬೇಕಾ ಗುರೂಜಿ

ಅಂಕುರ್: ಹೌದ್ರೀ .... ನಿಮ್ಮ ಪೂರ್ತಿ ಹೆಸರು ಹೇಳಿ

ಮೂರ್ತಿ: ಅದು ಬಂದು ಸೋಮನಹಳ್ಳಿ ಸೂರಪ್ಪನ ಮಗ ಕಲ್ಲ ಹಳ್ಳಿ ಬಸಪ್ಪನ ಮಗ ಚನ್ನಿಗಪ್ಪನಮಗ ನಾಗಮಂಡಲದ ನಾಗೇಶಾಚಾರ್ಯರ ಮಗ ನರಸಿಂಹಚಾರ್ಯರಮಗ ಲಂಭೋಧರನಾರಾಯಣ ನವರ ಮಗ ರುದ್ರಾಪಟ್ಟಣದ ನರಸಿಂಹಮೂರ್ತಿ ಅಂತ ಸಾರ್. 

ಅಂಕುರ್: ಅಲ್ಲಾರೀ ನೀವು ವರುಷಕ್ಕೆ ಒಂದರಂತೆ ಹೆಸರುಗಳನ್ನು ಸೇರಿಸಿಕೊಳ್ಳುತ್ತಿದ್ದೀರಾ ....... ಏನು ಕಥೆ ನಿಮ್ಮದು ..... ಇಡೀ ವಂಶಾವಳೀನೇ ಹೇಳ್ತಾಇದ್ದೀರಲ್ರೀ

ಬ್ರಹ್ಮಾನಂದ ಗುರೂಜಿ: ಅಲ್ರೀ ಸ್ವಾಮಿ ನಿಮ್ಮ ಎಲ್ಲಾ ಜನ ಏನಂತ ಕರೀತಾರೆ.

ಮೂರ್ತಿ: ಅದು ಬಂದು ಮೂರ್ತಿ ಅಂತಾರೆ ಗುರೂಜೀ

ಬ್ರಹ್ಮಾನಂದ ಗುರೂಜಿ: ನಿಮ್ಮ ಧರ್ಮ ಪತ್ನೀ ಹೆಸರು

ಮೂರ್ತಿ: ಹಂಗಂದ್ರೆ

ಅಂಕುರ್: ನಿಮ್ಮ ಹೆಂಡತಿ ಹೆಸರು ಹೇಳ್ರಿ

ಮೂರ್ತಿ: ಅದು ಬಂದು ಎಲ್ಲಾರು ಮಾತಂಗಮಹಾಲಕ್ಷಿ ಅಂತ ಕರೀತಾರೆ ಗುರೂಜಿ.

ಬ್ರಹ್ಮಾನಂದ ಗುರೂಜಿ: ಹಾ ಅವರು ಯಾವಾಗಲೂ ಮನೆಯಲ್ಲೇ ಇರುತ್ತಾರಾ ಹೇಗೆ ಅಂತ ....

ಅಂಕುರ್: ಅದು ನಿಮಗ್ಯಾಕೆ ಗುರೂಜಿ?

ಮೂರ್ತಿ: ಇಲ್ಲಾ ಗುರೂಜಿ, ಅವಾಗಾವಾಗ ಹಿತ್ತಲಕಡೇ ಹೋಗ್ತಾಯಿರ್ತಾರೆ ಗುರೂಜಿ.

ಅಂಕುರ್: ಹಾ ಗುರೂಜಿ ..... ದಯವಿಟ್ಟು ಇನ್ನೇನು ಪ್ರಶ್ನೆ ಕೇಳ್ಬೇಡಿ.

ಬ್ರಹ್ಮಾನಂದ ಗುರೂಜಿ: (ಕವಡೆ ಹಾಕಿ) ಹೂ ನೋಡಿ ಮೂರ್ತಿಯವರೆ ..... ಹಾ ನಿಮ್ಮ ಜನ್ಮದಿನಾಂಕದ ಪ್ರಕಾರ ನಿಮ್ಮ ಅಧಿಪತಿ ಕೇತು ಹಾಗಾಗಿ ನಿಮ್ಮ ಹೆಸರಲ್ಲಿ ಏನು ಇದೆ ಅಂತ ನೋಡಿದಾಗ ಮೂರ್ತಿ ಅಂದರೆ ಮೂರು ತ್ರೀ ಅಂತಾಗುತ್ತೆ ... ಅಂದರೆ ... ಮೂರು ಮೂರಲ ಒಂಭತ್ತು ... ಅಂದರೆ ... ಮಂಗಳ ಈ ಮಂಗಳಕ್ಕೆ ಕೇತು ಅಷ್ಟಾಗಿ ಆಗಿಬರಲ್ಲ. ಅದ್ದರಿಂದ ಜನ ಏನು ಹೇಳಿದರೂ ನಿಮಗೆ ಅರ್ಥವಾಗಲ್ಲ.

ಮೂರ್ತಿ: ಈಗ ನೀವು ಹೇಳ್ತಿರೋದೂ ಸಹ ನನಗೆ ಏನೂ ಅರ್ಥವಾಗ್ತಾಯಿಲ್ಲ ಗುರೂಜಿ, ... ಆ ಕೇತು ಯಾರೋ ನನಗೆ ಗೊತ್ತಿಲ್ಲಾ, ಆದರೆ, ಮಂಗಳ ಬಂದು ನಮ್ಮ ನಾದಿನಿಯ ಓರಗಿತ್ತಿಯ ಮಗಳಾಗಬೇಕು ಗುರೂಜಿ.

ಬ್ರಹ್ಮಾನಂದ ಗುರೂಜಿ: ಅದು ಅವರಿಂದ ನಿಮಗೆ ಏನೂ ಪ್ರಯೋಜನವಿಲ್ಲ ಬಿಡಿ, ... ನಾನು ಹೇಳೋದು ಸ್ವಲ್ಪ ಕೇಳಿ, ... ನೀವು ಈಗ ನಿಮ್ಮ ಹೆಸರನ್ನು ಬದಲಾಯಿಸಿಕೊಳ್ಳಬೇಕಾಗುತ್ತೆ.

ಮೂರ್ತಿ: ಏನಂತಾ ಗುರೂಜಿ

ಬ್ರಹ್ಮಾನಂದ ಗುರೂಜಿ: ಮೂರ್ತಿ ಅನ್ನುವುದರ ಬದಲು ನಾಕುರ್ತಿ ಅಂತ ಬದಲಾಯಿಸಿಕೊಳ್ಳಿ, ಅಂದರೆ ... ನಾಕು ಮೂರ್ಲಾ ಹನ್ನೆರಡು ಆಗುತ್ತೆ ... ಹನ್ನೆರಡು ಅಂದರೆ ಒಂದು ಎರಡು ಸೇರಿ ಮೂರು ಆಗುತ್ತೆ ... ಮೂರು ಅಂದರೆ ಗುರು, ಗುರು ಅಂದರೆ ಅದು ಸ್ವಲ್ಪ ಪರವಾಗಿಲ್ಲ.

ಮೂರ್ತಿ: ಸರಿ ಗುರೂಜಿ, ಹಂಗೇ ಮಾಡ್ತೀನಿ.

ಅಂಕುರ್: ಧನ್ಯವಾದ ಮೂರ್ತಿಗಳೇ .... ಕಾಲ್ ಮಾಡಿದ್ದಕ್ಕೆ

ಮೂರ್ತಿ: ಹಾ ಗುರೂಜಿ, ಒಂದೇ ಒಂದು ಪ್ರಶ್ನೆ

ಬ್ರಹ್ಮಾನಂದ ಗುರೂಜಿ: ಹಾ ಹೇಳಿ ನಾಕುರ್ತಿಯವರೆ ....

ಮೂರ್ತಿ: ನಮ್ಮ ಮಗನ ಹೆಸರು ಚೆನ್ನಾಗಿದೀಯ ಅಂತ ಸರಿಯಾಗಿ ನೋಡಿ ಸ್ವಲ್ಪ ಹೇಳಿ ಗುರೂಜಿ.

ಬ್ರಹ್ಮಾನಂದ ಗುರೂಜಿ: ಹೂ ಹೇಳಿ.

ಮೂರ್ತಿ: ಅದು ಬಂದು ಸೋಮನಹಳ್ಳಿ ಸೂರಪ್ಪನ ಮಗ ಕಲ್ಲ ಹಳ್ಳಿ ಬಸಪ್ಪನ ಮಗ ಚನ್ನಿಗಪ್ಪನಮಗ ನಾಗಮಂಡಲದ ನಾಗೇಶಾಚಾರ್ಯರ ಮಗ ನರಸಿಂಹಚಾರ್ಯರಮಗ ಲಂಭೋಧರನಾರಾಯಣ ನವರ ಮಗ ರುದ್ರಾಪಟ್ಟಣದ ನರಸಿಂಹಮೂರ್ತಿ ಮಗ ವೆಂಕಟೇಶಮೂರ್ತಿ ಅಂತ ಗುರೂಜಿ.

ಅಂಕುರ್: ಹಲೋ ..... ಹಲೋ ..... ಹಲೋ ..... ಗುರೂಜಿ ..... ಕಾಲು ಕಟ್ಟಾಗಿದೆ ಅಂತ ಕಾಣಿಸ್ತಾಯಿದೆ.

ಬ್ರಹ್ಮಾನಂದ ಗುರೂಜಿ: ಹಾ ಎಂತೆಂತಾ ಹೆಸರುಗಳನ್ನಿಟ್ಟು ಕೊಂಡಿರುತ್ತಾರೆ ಜನ ..... ಏನೇನು ರಿಕ್ವೈರ್ಮೆಂಟ್ ಇರುತ್ತೆ ... ನೋಡಿ ಈ ಪ್ರಪಂಚದಲ್ಲಿ ದೈವಾಂಶ ಸಂಭೂತರಾಗಿರ ಬೇಕಾದರೆ ....

ಅಂಕುರ್: ಅದು ನಿಜ ಬಿಡಿ. ಅಂದ ಹಾಗೆ ನೀವು ದೈವಾಂಶ ಸಂಭೂತರು ಎಂದಾಗ ನೆನಪಾಯ್ತು, ಈ ಕತ್ತೆಗಳಿಗೂ ಸಹ ... ಜಾತಕ ಅನ್ನೋದು ಉಂಟಾ.  

ಬ್ರಹ್ಮಾನಂದ ಗುರೂಜಿ: ಹೂ ... ಹಾ ... ಯಾಕ್ ಹೇಳ್ತೀರಾ. ಅಲ್ಲಿ .....

ಅಂಕುರ್: ಇನೊಂದು ಕಾಲು ಬರ್ತಾಯಿದೆ, ಯಾರದ್ದು ನೋಡೋಣ. ಹಲೋ .... ಹಲೋ ....

ವಿಲ್ಸನ್: ಹಲೋ ಸರ್, ..... ಮೈ ನೇಮ್ ಈಸ್ ವಿಲ್ಸನ್, ..... ದಬ್ಳಿಯೂ - ಐ - ಎಲ್ - ಎಸ್ - ಒ - ಎನ್. ಐ ಯಾಮ್ ಸ್ಪೀಕಿಂಗ್ ಫ್ರಂ ಟಿಂಬಕ್ಟು, ಸರ್, ಸರ್, ಐ ಡೋಂಟ್ ನೋ ಹೌ ಟು ಸ್ಪೀಕ್ ಇನ್ ಕನ್ನಡ, ಬಟ್ ಐ ಯಾಮ್ ಇಂಟೆರೆಸ್ಟೆಡ್ ಟು ನೋ ಮೈ ಫ್ಯೂಚರ್.

ಅಂಕುರ್: ಅಚ್ಚಾ

ಬ್ರಹ್ಮಾನಂದ ಗುರೂಜಿ: ಏನಂತೆ

ಅಂಕುರ್: ಅದು ಅವರಿಗೆ ಕನ್ನಡ ಬರಲ್ವಂತೆ ....

ಬ್ರಹ್ಮಾನಂದ ಗುರೂಜಿ: ಅವರು ಹೇಳು ಭಾಷೆ ನನಗೆ ಅರ್ಥವಾಗಲ್ಲ....

ಅಂಕುರ್: ಓ ಹಾಗಾದರೆ ಗುರೂಜಿ ... ಒಂದು ಕೆಲಸಮಾಡಿ, ಅವರು ಹೇಳಿದ್ದನ್ನ ನಾನು ನಿಮಗೆ ಹೇಳ್ತೀನಿ, ನೀವು ನನಗೆ ಹೇಳಿ, ನಾನು ಅದನ್ನ ಅವರಿಗೆ ಇಂಗ್ಲೀಷ್ ಭಾಷೆಗೆ ಟ್ರಾನ್ಸ್ಲೇಟ್ ಮಾಡಿ ಹೇಳಲು ಪ್ರಯತ್ನಮಾಡ್ತೀನಿ.

ಬ್ರಹ್ಮಾನಂದ ಗುರೂಜಿ: ಸರಿ, ಹಾಗಾದರೆ ನೀವು ಅವರ ಹೆಸರು ಮತ್ತು ಜನ್ಮದಿನಾಂಕವನ್ನು ಕೇಳಿ ತಿಳಿದುಕೊಳ್ಳಿ.

ಅಂಕುರ್: ಹಲೋ .... ಹಲೋ .... ಓಹ್ ... ಆ .... ಆ .... ವಾಟ್ .... ಈಸ್ ........ ಯುವರ್ ....... ನೇಮ್.

ವಿಲ್ಸನ್: ಓಹ್ ... ಮೈ ನೇಮ್ ಈಸ್ ವಿಲ್ಸನ್ .... ದಬ್ಳ್ಯೂ .... ಐ ....ಎಲ್ ...... ಎಸ್ ..... ಓ .... ಎನ್.... ದಬ್ಳ್ಯೂ ಫಾರ್ ವಿಷ್ಕಿ ....ಐ ಫಾರ್ ಇಂಡಿಯ ... ಎಲ್ ಫಾರ್ ಲೀಮಾ .... ಎಸ್ ಫಾರ್ ಸಿಯೆರಾ .... ಓ ಫಾರ್ ಓಸ್ಕಾರ್ .... ಎನ್ ಫಾರ್ ನವೆಂಬರ್ ...

ಅಂಕುರ್: ಹಾ .... ಹಾ ..... ವಾಟ್ ..... ಈಸ್ ...... ಯುವರ್ ...... ಡೇಟ್ ..... ಆಫ್ .....ಬರ್ತ್

ವಿಲ್ಸನ್: ಇಟ್ ಈಸ್ ನೈನ್ - ಎಯ್ಟ್ - ನೈನ್ಟೀನ್ - ಎಯ್ಟೀ (೯ - ೮ - ೧೯೮೦)

ಅಂಕುರ್: ಗುರೂಜೀ ಅವರ ಹೆಸರು ಬಂದು ವಿಲ್ಸನ್ ಅಂತ. ಅವರು ಹುಟ್ಟಿದ ತಾರೀಕು ಬಂದು ಒಂಬತ್ತು - ಎಂಟು - ಒಂದು ಸಾವಿರದ ಒಂಭೈನೂರ ಎಂಬತ್ತು ಅಂತ ಹೇಳ್ತಿದ್ದಾರೆ.

ಬ್ರಹ್ಮಾನಂದ ಗುರೂಜಿ: ಹಾ ... ಮದುವೆ ಆಗಿದೆಯಾ?

ಅಂಕುರ್: ಹಾ .... ಹಾ .... ಮ್ಯಾರಿಯೇಜ್ .... ಓವರ್.

ವಿಲ್ಸನ್: ಯಾ ಯಾ

ಬ್ರಹ್ಮಾನಂದ ಗುರೂಜಿ: ಆಗಿದೆಯಾ?

ಅಂಕುರ್: ಹೂ ... ಆಗಿರಬೇಕು ಅನ್ಸುತ್ತೆ.

ಬ್ರಹ್ಮಾನಂದ ಗುರೂಜಿ: ಆಮೇಲೆ ನೋಡಿ ವಿಲ್ಸನ್ ರವರೆ ನಿಮ್ಮ ಜಾತಕಾ ಪ್ರಕಾರ ನಿಮಗೆ ದಾರಿದ್ಯ ಎದ್ದು ಕಾಣ್ತಾಯಿದೆ.

ಅಂಕುರ್: ಮಿಸ್ಟರ್ ವಿಲ್ಸನ್, ಯುವರ್ .... ಜಾತಕ ..... ಈಸ್ .....ಗೆಟಿಂಗ್ ... ಅಪ್... ದರಿದ್ರ.

ವಿಲ್ಸನ್: ಸಾರಿ .... ಐ ಡಿಡ್ನಾಟ್ ಗೆಟ್ ಯೂ

ಬ್ರಹ್ಮಾನಂದ ಗುರೂಜಿ: ಏನಂತಿದಾರೆ

ಅಂಕುರ್: ಇರಲಿ, ತಿರುಗಿ ಆಮೇಲೆ ನೋಡಿಕೊಳ್ತೀನಿ ಅಂತಿದ್ದಾರೆ.

ಬ್ರಹ್ಮಾನಂದ ಗುರೂಜಿ: ಹಾಗೇನಿಲ್ಲ, ನೀವು ತಪ್ಪು ತಿಳಿದುಕೊಂಡಿದ್ದೀರೀ. ನಾನು ಇದ್ದಿದ್ದನ್ನು ಇದ್ದಹಾಗೆ ಹೇಳ್ತೀನಿ.

ಅಂಕುರ್: ಹೇಳಾಕೆ ಟ್ರೈಮಾಡ್ತೀನಿ ಗುರೂಜಿ. ..... ಸೀ ಮಿಸ್ಟರ್ ....... ವಿಲ್ಸನ್ ..... ಗುರೂಜಿ .... ಸೇಸ್ ..... ದಟ್ .... ಯೂ ..... ಆರ್ ..... ಮಿಸ್ಟೇಕಿಂಗ್ ...... ಐ ...... ಸೆಡ್ .....ದಟ್ ..... ದಿಸ್ .....ದಿಸ್ .....ಈಸ್ .....ಲೈಕ್ ......ದಿಸ್ .... ವಾಟ್ .... ಇಟ್ .... ವಾಸ್.

ವಿಲ್ಸನ್: ವಾಟ್ ಈಸ್ ದಟ್ ದೀಸ್ ಪೀಪಲ್ ಆರ್ ಟಾಕಿಂಗ್

ಬ್ರಹ್ಮಾನಂದ ಗುರೂಜಿ: ಆದರೆ ... ಮಿಸ್ಟರ್ ವಿಲ್ಸನ್ ರವರೆ ನಿಮಗೆ ಒಳ್ಳೆಯ ಅರ್ಧಾಂಗಿ ಸಿಕ್ಕಿದ್ದಾಳೆ.

ಅಂಕುರ್: ಸೀ .... ಮಿಸ್ಟರ್ ...... ವಿಲ್ಸನ್ ...... ಯೂ ...... ಹ್ಯಾವ್ ...... ಗಾಟ್ ...... ಗುಡ್ ...... ಹಾಫ್ ...... ಶರ್ಟ್

ವಿಲ್ಸನ್: ತ್ಯಾಂಕ್ಯು ... ಬಟ್ ವಾಟ್ ಐ ಕುಡ್ ಡೂ ಇನ್ ದಿ ಫ್ಯೂಚರ್, ಐ ಯಾಮ್ ಆಸ್ಕಿಂಗ್ ಎಬೌಟ್ ಮೈ ಫ್ಯೂಚರ್, ಐ ಡೋಂಟ್ ನೋ ವಾಟ್ ದೀಸ್ ಪೀಪಲ್ ಆರ್ ಟಾಕಿಂಗ್ ಎಬೌಟ್.

ಅಂಕುರ್: ಹಾ ಗುರೂಜಿ ... ಅದು ಶರಟು ಬಗ್ಗೆ ಅಥವ ಅವರ ಹೆಂಡ್ತಿ ಬಗ್ಗೆ ಅವರು ಕೇಳ್ತಾಯಿಲ್ಲ. ಅವರು ಅವರ ಫ್ಯೂಚರ್ ಬಗ್ಗೆ ಕೇಳ್ತಿದ್ದಾರೆ.

ಬ್ರಹ್ಮಾನಂದ ಗುರೂಜಿ: ಅಷ್ಟೇನಾ ... ನಾನು ಏನೋ ಅಂತ ಅಂದುಕೊಂಡುಬಿಟ್ಟಿದ್ದೆ

ಅಂಕುರ್: ಓಕೆ ದಟ್ ಈಸ್ ಆಲ್ ಓ ವಟ್ ಊ ವಾಟ್ ಓ

ಬ್ರಹ್ಮಾನಂದ ಗುರೂಜಿ: ಅದು ಹೀಗೆಲ್ಲಾ ಆಗೊಲ್ಲಾ, ನೀವು ನೇರವಾಗಿ ಬಂದು ಬೇಟಿಮಾಡಿದರೆ ನಾನು ನಿಮಗೆ ಸೂಕ್ತ ಸಲಹೆ ಕೊಡ್ತೀನಿ, ಆಮೇಲೆ ನಿಮಗೆ ಮಂಗಳ ಗ್ರಹ ದೋಷವಿದೆ, ಅವರಿಗೆ ಹಿಂದಿ ಬರುತ್ತಾ ಕೇಳಿ

ಅಂಕುರ್: ಮಿಸ್ಟರ್ ವಿಲ್ಸನ್ ಡೂ ಯೂ ನೋ ಹಿಂದಿ?

ವಿಲ್ಸನ್: ಹಾ ಐ ನೋ ಹಿಂದಿ

ಅಂಕುರ್: ಹಾ ಅವರಿಗೆ ಹಿಂದಿ ಗೊತ್ತಂತೆ.

ಬ್ರಹ್ಮಾನಂದ ಗುರೂಜಿ: ಅಂದ್ರೆ ನಾನು ಒಂದು ಶ್ಲೋಕ ಹೇಳಿಕೊಡುತ್ತೀನಿ, ನೀವು ಅದನ್ನು ಹೇಳಿ ....

ಅಂಕುರ್: ಮಿಸ್ಟರ್ ವಿಲ್ಸನ್ .... ನೌ ... ಗುರೂಜಿ ... ವಿಲ್ .... ಟೆಲ್ ... ಸಂ ... ತಿಂಗ್ .... ಯೂ ..... ಜಸ್ಟ್ .... ರಿಪೀಟ್ .... ಇಟ್ .... ದಟ್ ಈಸ್ .... ಆಲ್ .....

ಬ್ರಹ್ಮಾನಂದ ಗುರೂಜಿ: ಶ್ಲೋಕ ಬಂದು ಈ ರೀತಿ ಇರುತ್ತೆ ... ಮಂಗಳ ಮಂಗಳ ಮಂಗಳ ಮಂಗಳ ಮಂಗಳ ಮಂಗಳ ಓಂ ....ಮಂಗಳ ಮಂಗಳ ಮಂಗಳ ಮಂಗಳ ಮಂಗಳ ಮಂಗಳ ಓಂ ..

ವಿಲ್ಸನ್: ಮಂಗಳ್ ಮಂಗಳ್ ಮಂಗಳ್ ಮಂಗಳ್ ಮಂಗಳ್ ಮಂಗಳ್ ಓಂ ... ಮಂಗಳ್ ಮಂಗಳ್ ಮಂಗಳ್ ಮಂಗಳ್ ಮಂಗಳ್ ಮಂಗಳ್ ಓಂ

ಅಂಕುರ್: ಧನ್ಯವಾದಗಳು

ಗುರೂಜಿ.... ಧನ್ಯವಾದಗಳು ಮಿಸ್ಟರ್ ವಿಲ್ಸನ್.

ಅಂಕುರ್: ಇಲ್ಲಿಗೆ ನಮ್ಮ ಮೊದಲನೇ ಸುತ್ತಿನ ಪಿತೂರಿ ಕಾರ್ಯಕ್ರಮ ಕಾಲ್ ಮಾಡಿ ಕಣಿ ಕೇಳಿ ಮುಕ್ತಾಯವಾಗ್ತಾಯಿದೆ. ಮುಂದಿನ ಸುತ್ತಿಗೆ ಮೊದಲು ಒಂದು ಚಿಕ್ಕ ಬ್ರೇಕ್ ತೆಗೆದುಕೊಳ್ಳಬೇಕಾಗಿದೆ.

ರಾಜಣ್ಣ: ಬೇಗ ಬೇಗ ಕೇಕ್, ಬಿಸ್ಕತ್ ಅಂಡ್ ಟೀ ನ ಅರೇಂಜ್ ಮಾಡಿ ಬ್ರೇಕ್ನ ಸಮಯದಲ್ಲಿ ಬೇಕಾಗುತ್ತೆ.

ಆನಂದ್: ರೀ ಇನ್ನು ಸ್ವಿಚ್ ಆಫ್ ಮಾಡಿಲ್ಲ ಎಲ್ಲರಿಗೂ ಕೇಳಿಸ್ತಾಇದೆ. ಮೊದಲು ಸ್ವಿಚ್ ಆಫ್ ಮಾಡಿ, ಆಮೇಲೆ ಮಾತಾಡಿ.

(ಮುಂದುವರಿಯುವುದು ....... ಬ್ರೇಕ್ನ ನಂತರ ....... )

e-mail: excellenttuitions@yahoo.com
WhatsApp: +91 9844027371



Excellent Tuitions